ಮುರಿಗೆ ದೇಶಿಕೇಂದ್ರ
	ಸು.1840. ವೀರಶೈವ ಕವಿ. ರಾಜೇಂದ್ರವಿಜಯ ಕಾವ್ಯದ ಕರ್ತೃ. ಈತ ಗುಳೇದಗುಡ್ಡದ ಮುರಿಗೆ ಮಠದ ಪೀಠಾಧಿಪತಿಯಾಗಿದ್ದಂತೆ ತೋರುತ್ತದೆ. ಮುರಿಗೆ ಶಾಂತವೀರ ಈತನ ಗುರುವಾಗಿದ್ದರಬಹುದು. ಕವಿ ಎಲ್ಲಿಯೂ ತನ್ನ ಹೆಸರು ಹೇಳಿಲ್ಲ. ಒಂದು ಹಳೆಯ ಹಸ್ತಪ್ರತಿಯ ಪ್ರತಿಕಾರನಿಂದ ರಾಜೇಂದ್ರವಿಜಯದ ಕರ್ತೃ ಈತನೇ ಎಂದು ತಿಳಿದುಬರುತ್ತದೆ.

	ರಾಜೇಂದ್ರ ವಿಜಯ ಚಂಪೂ ಕಾವ್ಯ. 9 ಪ್ರಕರಣಗಳಿದ್ದು 750 ಪದ್ಯಗಳಿವೆ. ಇದಕ್ಕೆ ಹಮ್ಮೀರ ಕಾವ್ಯ, ಮನುರಾಜನ ಕಾವ್ಯ, ಎಂಬ ಹೆಸರುಗಳೂ ಇವೆ. ಇದರ ಪ್ರಭುದೇವರ ಗುರು ಅನಿಮಿಷದೇವನ ಚರಿತ್ರೆ ನಿರೂಪಿತವಾಗಿದೆ. ಅಲ್ಲಲ್ಲಿ ಇತರರ ಕಥೆಗಳೂ ಇವೆ. ಸಿಂಗಿರಾಜನ (ಸು. 1500) ಅಮಲ ಬಸವಪುರಾಣದಲ್ಲಿಯ ಅನಿಮಿಷಯ್ಯನ ಕತೆ ಈ ಕೃತಿಗೆ ಆಕರ. ಅಲ್ಲದೆ ಚಾಂವರಸನ ಪ್ರಭುಲಿಂಗಲೀಲೆಯಿಂದಲೂ ಈತ ಪ್ರಭಾವಿತನಾಗಿದ್ದಾನೆ. ಈತನಿಗೆ ಕನ್ನಡ-ಸಂಸ್ಕøತಗಳ ಪ್ರಯೋಗದಲ್ಲಿ ಸರಿಸಮವಾದ ಪ್ರಭುತ್ವವಿದೆ. ಅಲಂಕಾರಗಳನ್ನು ಹಿತಮಿತವಾಗಿ ಬಳಸಿದ್ದಾನೆ. ವರ್ಣನೆಗಳಲ್ಲಿ ಹಿಡಿತವಿದೆ. ಕಾವ್ಯದಲ್ಲಿ ಭಕ್ತಿರಸ ನಿರೂಪಣೆ ಪ್ರಮುಖವಾಗಿದೆ. ಕವಿ ಅಲ್ಲಲ್ಲಿ ಮಂದಾಕ್ರಾಂತ ಮೊದಲಾದ ಕನ್ನಡ ಛಂದಸ್ಸಿನ ಅಪೂರ್ವವಾದ ಅಕ್ಷರ ವೃತ್ತಗಳನ್ನು ಬಳಸಿದ್ದಾನೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ